ಬೀದರಿ ಕಲೆ -
ಕರ್ನಾಟಕದ ಕರಕುಶಲ ಕಲೆಗಳ ಪೈಕಿ ಒಂದು. ಬೀದರಿನ ಹಾಗೂ ಸುತ್ತ ಮುತ್ತಲ ಪ್ರದೇಶಗಳಲ್ಲಿ ಕಾಣಬಹುದು. ಇದರ ಇತಿಹಾಸ ಬಹಮನೀ ಅರಸರ ಕಾಲದಿಂದ ಆರಂಭವಾಗುತ್ತದೆ. ಪಚ್‍ರಸ್ ಎಂಬ ಹೆಸರಿನ ವಿಶೇಷ ಸಂಯುಕ್ತದ ಬಳಕೆಯೊಂದಿಗೆ ಈ ಕಲೆಯ ಪ್ರಯೋಗ ಆರಂಭವಾಯಿತು. (15ನೆಯ ಶತಮಾನ). ಬಾದಶಹ ಅಹಮ್ಮದ ಶಾಹಾವಲಿ ಬಹಮನಿ ಇರಾನ್ ದೇಶದಿಂದ ಕೆಲ ಕಲಾಕಾರರನ್ನು ಬೀದರಿನಲ್ಲಿಯ ರಂಗೀನ್ ಮಹಲ್ ಮೊದಲಾದವನ್ನು ಕಟ್ಟುವಲ್ಲಿ ಕುಸುರಿ ಮತ್ತು ಕಲಾತ್ಮಕ ಕೆಲಸಮಾಡಲು ಕರೆತಂದ. ಹೀಗೆ ಬಂದ ಜನ ಬೀದರಿನಲ್ಲಿ ದೊರೆಯುವ ವಿಶೇಷ ಜಾತಿಯ ಮಣ್ಣು, ತಾಮ್ರ, ಸತುವು ಮತ್ತು ತವರ ಧಾತುಗಳ ಮಿಶ್ರಣದಿಂದ ಪಚ್‍ರಸ್ ಸಂಯುಕ್ತವನ್ನು ಮೊದಲ ಬಾರಿಗೆ ಸಿದ್ಧಮಾಡಿದರು. ಇದನ್ನು ಬಳಸಿ ಪಾತ್ರೆಗಳನ್ನು ಅಲಂಕಾರಿಕ ವಸ್ತುಗಳನ್ನು ಹುಕ್ಕಾ, ಗುಲ್ದಾನ್ (ಹೂಬುಟ್ಟಿ) ನೀರಿನ ಹೂಜಿ, ಪಾನದಾನ್ (ಎಲೆ ಅಡಿಕೆಯ ಡಬ್ಬಾಗಳು), ತಟ್ಟೆ, ಬೂದಿಕರಂಡಕ ಮುಂತಾದವನ್ನು ತಯಾರಿಸಲಾಗುತ್ತಿತ್ತು. ಇವೆಲ್ಲವನ್ನೂ ಚಿತ್ರಗಳಿಂದ ಅಲಂಕರಿಸಲಾಗುತ್ತಿತ್ತು. ಸಾಮಾನ್ಯವಾಗಿ ಚಿತ್ರಬಿಡಿಸುವ ಕುಸುರಿ ಕೆಲಸವನ್ನು ಬೆಳ್ಳಿಯ ವರ್ಖ ಮತ್ತು ಬೆಳ್ಳಿಯ ತಂತಿಗಳಿಂದ ಮಾಡುತ್ತಿದ್ದರು. ಈ ಕೆಲಸ ನಾಲ್ಕು ಬಗೆಯಲ್ಲಿ ನಡೆಯುತ್ತದೆ. 

	1. ಪಚ್‍ರಸ್ ಸಂಯುಕ್ತದ ಪಾತ್ರೆಯ ಮೈಮೇಲೆ ಬೆಳ್ಳಿಯ ವರ್ಖನ್ನು ನಿಲ್ಲಿಸುವುದು. 2. ಬೆಳ್ಳಿಯ ವರ್ಖನ್ನು ಪಚ್‍ರಸ್ ಜೊತೆಯಲ್ಲಿ ದ್ರವವಾಗಿರುವಾಗ ಬೆರೆಸುವುದು. 3. ಬೆಳ್ಳಿಯ ವರ್ಖಕ್ಕೆ ಪ್ರತಿಯಾಗಿ ಬೆಳ್ಳಿಯ ತಂತಿಯನ್ನು ಬಳಸುವುದು. 4. ಪಚ್‍ರಸ್ ದ್ರವವಾಗಿರುವ ಪಾತ್ರೆಯ ಹೊರ ಮೈಯನ್ನು ಸಂಪೂರ್ಣ ಬೆಳ್ಳಿಯ ವರ್ಖದಿಂದ ಅಂಟಿಸಿ ಅನಂತರ ಅದರಲ್ಲಿ ಚಿತ್ರಗಳನ್ನು ಬಿಡಿಸಿ ಸಣ್ಣ ಉಳಿಯಿಂದ ಚಿತ್ರಗಳನ್ನು ಕೊರೆಯುವುದು. 

	ಈ ಪದ್ಧತಿಗಳಲ್ಲಿ ಒಂದಕ್ಕಿಂದ ಹೆಚ್ಚು ವಿಧಾನಗಳನ್ನು ಬಳಸಿದರೆ ದ್ವಿವಿಧಕ್ಕೆ ದುಕುರಾ ತ್ರಿವಿಧಕ್ಕೆ ಸೆಕಾರಾ ಮತ್ತು ಚತುರ್ವಿಧಕ್ಕೆ ಚೌಕಾರ ಎಂದು ಹೆಸರು. ಪಚ್‍ರಸ್ ಧಾತುವಿನಲ್ಲಿ ಎರಡು ವಿಧ; ಅದನ್ನು ಕೇವಲ ತಾಮ್ರ ಮತ್ತು ಸತುವು ಮಿಶ್ರಣದಿಂದಲೇ ತಯಾರಿಸಬಹುದು. ಇಲ್ಲವೇ ಎಲ್ಲ ಬಗೆಯ ಲೋಹಗಳ ಮಿಶ್ರಣದಿಂದಲೂ ಮಾಡಬಹುದು.  		   
(ಎಸ್.ಎಸ್.ಜೆ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ